ಅಪರಾಜಿತವರ್ಮ
	
ಪಲ್ಲವರಾಜವಂಶದ ಸಮರ್ಥನಾದ ಕೊನೆಯ ದೊರೆ. ಪಲ್ಲವ ನೃಪತುಂಗವರ್ಮನ ಮಗ. 879ರಿಂದಲೆ ಅಂದರೆ ತನ್ನ ತಂದೆಯ ಜೀವಿತಕಾಲದಲ್ಲಿಯೆ, ರಾಜ್ಯಭಾರದಲ್ಲಿ ಪಾಲ್ಗೊಂಡು ಯುವರಾಜನಾಗಿದ್ದ. ಇವನ ಶಾಸನಗಳು ಇವನ ರಾಜ್ಯಭಾರದ ಮೂರನೆಯ ವರ್ಷದಿಂದ ಹದಿನೆಂಟನೆಯ ವರ್ಷದವರೆಗೂ ದೊರತಿವೆ. ಸಾಮಾನ್ಯವಾಗಿ ಅವು ತಿರುವೊಟ್ಟಿಯೂರು ಮತ್ತು ಸತ್ಯ ವೀಡುಗಳಲ್ಲಿ ವಿಶೇಷವಾಗಿವೆ. ಅಪರಾಜಿತವರ್ಮನ ಕಾಲದ ಮುಖ್ಯ ಘಟನೆಯೆಂದರೆ ಪಾಂಡ್ಯರ ಅಪಜಯ. ಅಪರಾಜಿತವರ್ಮ ತನ್ನ ಸಾಮಂತನಾದ ಗಂಗ ಪೃಥ್ವೀಪತಿ ಮತ್ತು ಚೋಳರಾಜನಾದ ಆದಿತ್ಯ ಇವರ ಸಹಾಯದಿಂದ, ಪಾಂಡ್ಯ ರಾಜನಾದ ಎರಡನೆಯ ವರಗುಣವರ್ಮನ ಮೇಲೆ ಕುಂಭಕೋಣದ ಸಮೀಪದಲ್ಲಿರುವ ಶ್ರೀಪುರಂಬಿಯಂ ಎಂಬಲ್ಲಿ ಯುದ್ಧಮಾಡಿ (880) ಪೂರ್ಣಜಯ ಪಡೆದ. ಇವನ ಸಾಮಂತನಾದ ಗಂಗಪೃಥ್ವೀಪತಿ ಯುದ್ಧದಲ್ಲಿ ಮರಣಹೊಂದಿದ. ಪಾಂಡ್ಯರ ಮೇಲೆ ವಿಜಯವನ್ನು ಸಂಪಾದಿಸಿದ ಅಪರಾಜಿತ ಅತಿಶೀಘ್ರದಲ್ಲಿಯೆ ಆ ಗೌರವವನ್ನು ಕಳೆದು ಕೊಳ್ಳಬೇಕಾಯಿತು. ಸಾಮಂತನಾಗಿದ್ದ ಚೋಳರ ರಾಜನಾದ ಮೊದಲನೆಯ ಆದಿತ್ಯ ಹಠಾತ್ತನೆ ಅಪರಾಜಿತನ ಮೇಲೆ ದಂಡೆತ್ತಿಬಂದು ಅವನನ್ನು ಕೊಂದು, ತೊಂಡೆಮಂಡಲವನ್ನು ವಶಮಾಡಿಕೊಂಡ (897). ಅಂದಿನಿಂದ ಪಲ್ಲವರ ರಾಜ್ಯ ಚೋಳರ ವಶವಾಯಿತು. ತಿರುತ್ತಣೆಯಲ್ಲಿರುವ ವೀರತ್ತಾನೇಶ್ವರ ದೇವಾಲಯ ಅಪರಾಜಿತವರ್ಮನ ಕಾಲದಲ್ಲಿ ನಿರ್ಮಿತವಾಯಿತೆಂದು ತಿಳಿದುಬರುತ್ತದೆ. ಅಲ್ಲಿರುವ ತಮಿಳುಶಾಸನ ಅಪರಾಜಿತವರ್ಮನ ರಾಜ್ಯಭಾರದ ಹದಿನೆಂಟನೆಯ ವರ್ಷದಲ್ಲಿ ರಚಿತವಾದದ್ದು. ವಾಸ್ತುಶಿಲ್ಪದ ದೃಷ್ಟಿಯಿಂದ ಈ ದೇವಾಲಯ ನಂದಿವರ್ಮನ ದೇವಾಲಯಶೈಲಿಗೆ ಸೇರಿದುದಾಗಿದೆ.

(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ